ಪಿನ್ನಿಪೀಡಿಯ	 -	
ಸ್ತನಿ ವರ್ಗಕ್ಕೆ ಸೇರಿದ ಒಂದು ಗಣ. ಜಲವಾಸಿ. ಮಾಂಸಹಾರಿ ಪ್ರಾಣಿಗಳಾದ ಸೀಲ್, ಕಡಲಸಿಂಹ, ವಾಲ್‍ರಸ್ ಮುಂತಾದ ಸುಮಾರು 20 ಜಾತಿಯ ಸ್ತನಿಗಳು ಇದಕ್ಕೆ ಸೇರಿವೆ. ಪ್ರಪಂಚದ ಬಹುಪಾಲು ಕಡಲತೀರ ಪ್ರದೇಶಗಳಲ್ಲಿ ಇವು ವಾಸಿಸುವುವು. ಧ್ರುವ ಪ್ರದೇಶಗಳಲ್ಲೂ ಸಮ ಶೀತೋಷ್ಣ ವಲಯದ ಕಡಲುಗಳಲ್ಲೂ ಇವು ಅಧಿಕ ಸಂಖ್ಯೆಯಲ್ಲಿವೆ. ಪ್ರಪಂಚದಾದ್ಯಂತ ಇವುಗಳ ಸಂಖ್ಯೆ 15 ದಶಲಕ್ಷಕ್ಕೂ ಹೆಚ್ಚಾಗಿರಬಹುದೆಂದು ಅಂದಾಜಿದೆ. 

ದೇಹ ಟಾರ್ಪೆಡೋ ಆಕಾರದಲ್ಲಿರುವುದು. ನಾಲ್ಕು ಕಾಲುಗಳು ದೋಣಿಯ ಹುಟ್ಟಿನಂತೆ ಮಾರ್ಪಾಟಾಗಿರುವುದು, ಎಲ್ಲ ಕಾಲ್ಬೆರಳುಗಳನ್ನೂ ಒಂದುಗೂಡಿಸುವಂತೆ ಹರಡಿರುವ ಬಲೆ-ಇವು ಪಿನ್ನಿಪೀಡಿಯಾಗಳ ಜಲವಾಸಕ್ಕೆ ಬಲು ಸೊಗಸಾಗಿ ಹೊಂದಿಕೊಂಡ ಲಕ್ಪ್ಷಣಗಳು. ಇವುಗಳ ತಲೆ ಚಪ್ಪಟೆಯಾಗಿದೆ. ಮುಖ ಬಲು ಮೊಂಡಾಗಿದೆ. ಕಿವಿಯ ಹಾಲೆಗಳು ತುಂಬಾ ಚಿಕ್ಕವಾಗಿರಬಹುದು ಅಥವಾ ಇಲ್ಲವೇ ಇಲ್ಲ. ಮೂಗಿನ ಹೊಳ್ಳೆಗಳು ಉದ್ದ ಬಿರುಕಿನಂತಿವೆ. ಕಣ್ಣುಗಳು ದಪ್ಪನೆಯ ಮೇದಸ್ಸಿನ ಮೆತ್ತೆಯೊಳಗೆ ಹುದುಗಿವೆ. ಕಣ್ಣಿನ ಪಾಪೆ ತುಂಬಾ ಹಿಗ್ಗಲಿಸುವಂತಿದೆ. ಕತ್ತು ದಪ್ಪವೂ ಸ್ನಾಯು ಪುಷ್ಟವೂ ಆಗಿದೆಯಾದರೂ ಸರಾಗವಾಗಿ ಬಾಗಬಲ್ಲುದು.

ಪಿನ್ನಿಪೀಡಿಯ ಗಣದ ಉದ್ದ 140 ಸೆಂ.ಮೀ. ನಿಂದ 650 ಸೆಂ.ಮೀ.ವರೆಗೆ ವ್ಯತ್ಯಾಸವಾಗುತ್ತದೆ. ತೂಕದಲ್ಲೂ ಭಿನ್ನತೆಯುಂಟು. 90 ಕೆ.ಜಿ. ತೂಗುವ ಉಂಗುರ ಸೀಲ್‍ಗಳು (ಪ್ಯೂಸ ಹಿಸ್ಟಿಡ) ಈ ಗುಂಪಿನ ಕುಬ್ಜರೆನಿಸಿದರೆ, ಆನೆ ಸೀಲ್‍ಗಳು, 3.5 ಮೆಟ್ರಿಕ್ ಟನ್ ಭಾರದ ದೈತ್ಯರೆನಿಸಿವೆ. ಸಾಮಾನ್ಯವಾಗಿ ಗಂಡುಗಳೇ ಹೆಣ್ಣುಗಳಿಗಿಂತ ಭಾರ. ಆದರೆ, ಫೋಸಿಡೀ ಕುಟುಂಬದ ಸದಸ್ಯರುಗಳಲ್ಲಿ ಗಂಡುಗಳು ಹೆಣ್ಣುಗಳಷ್ಟೇ ಅಥವಾ ಅವಕ್ಕಿಂತ ಕಡಿಮೆ ಗಾತ್ರದ್ದಾಗಿವೆ. ಈ ಗಣದ ಪ್ರಾಣಿಗಳ ಮೈಮೇಲೆ ದಟ್ಟವಾದ ಕೂದಲುಂಟು. ತುಪ್ಪಳಸೀಲ್‍ಗಳಾದ ಕ್ಯಾಲೊರೈನಸ್ ಮತ್ತು ಅಕ್ರ್ಟೊಸಿಫ್ಯಾಲಸ್‍ಗಳಲ್ಲಿ ನಯವಾದ ಮೋಟು ಕೂದಲು ಮತ್ತು ಒರಟಾದ ಉದ್ದ ಕೂದಲುಗಳು ಉಂಟು. ಫೋಸಿಡೀ ಕುಟುಂಬದ ಆನೆಸೀಲ್‍ಗಳ ಮರಿಗಳು ಹುಟ್ಟಿದಾಗ ಅವುಗಳ ಮೈಮೇಲೆ ತುಂಬಾ ದಟ್ಟವಾದ ನಯವಾದ, ಉಣ್ಣೆಯಂಥ ಕೂದಲಿನ ಹೊದಿಕೆ ಇರುತ್ತದೆ. ಹುಟ್ಟಿದ ಕೆಲವು ಗಂಟೆಗಳ ಇಲ್ಲವೇ ಕೆಲವು ವಾರಗಳ ತರುವಾಯ ಈ ಕೂದಲು ಉದುರಿ ಹೋಗಿ ಹೊಸ ಕೂದಲು ಬರುತ್ತದೆ. ಇವುಗಳ ದೇಹದಲ್ಲಿ ಎಪಿಡರ್ಮಿಸ್ ಮತ್ತು ಸ್ನಾಯುಗಳ ನಡುವಣ ಜಾಗದಲ್ಲಿ ಕೊಬ್ಬಿನ (ಬ್ಲಬರ್) ಮಂದಪದರವುಂಟು. ಇದರಿಂದ ಪ್ರಾಣಿಗಳಿಗೆ ಕಡು ಚಳಿಯ ವಿರುದ್ಧ ರಕ್ಷಣೆಯೂ ನೀರಿನಲ್ಲಿ ಸುಲಭವಾಗಿ ತೇಲುವ ಸಾಮಥ್ರ್ಯವೂ ಒದಗುವುದಲ್ಲದೆ ಈ ಕೊಬ್ಬು ಶಕ್ತಿಯ ಆಗರವೂ ಆಗಿ ವರ್ತಿಸುತ್ತದೆ. 

ಇವುಗಳಲ್ಲಿ ಜನನೇಂದ್ರಿಯಗಳೂ, ಮೊಲೆಯ ತೊಟ್ಟುಗಳು ಹೆಚ್ಚಿನ ಸಮಯ ದೇಹದೊಳಗೆ ಹುದುಗಿದಂತಿರುತ್ತವೆ.
ಪಿನ್ನಿಪೀಡಿಯ ಗಣದ ಪ್ರಾಣಿಗಳು ನೆಲದ ಮೇಲೆ ಎಷ್ಟು ಒಡ್ಡೊಡ್ಡಾಗಿ ನಡೆದಾಡುತ್ತವೆಯೋ, ನೀರಿನಲ್ಲಿ ಅಷ್ಟೇ ಚುರುಕಾಗಿ ಈಜಬಲ್ಲವು. ಈ ಗುಂಪಿನ ಓಟರೈಯಿಡೀ ಹಾಗೂ ಓಡೊಬೆನಿಡೀ ಕುಟುಂಬದ ಸದಸ್ಯರು ಮುಂಗಾಲಿನ ಸಹಾಯದಿಂದ ಈಜುತ್ತವಾದರೆ, ಫೋಸಿಡಿ ಕುಟುಂಬದವು ಈಜುವುದಕ್ಕೆ ಹಿಂಗಾಲನ್ನೆ ಅವಲಂಬಿಸಿವೆ. ಇವು ನೀರಿನಲ್ಲಿ 20 ಮಿನಿಟುಗಳ ಕಾಲ ಮುಳುಗಿರಬಲ್ಲವು. ಕೆಲವು ಪ್ರಭೇದಗಳು ತಮ್ಮ ಕಾರ್ಯ ಚಟುವಟಿಕೆಯನ್ನು ನೆಲದ ಮೇಲೆ ತೋರುವವಾದರೆ, ಇನ್ನೂ ಕೆಲವು ನೀರಿನಲ್ಲೇ ಕಳೆಯುವುವು. ಉದಾಹರಣೆಗೆ ಉತ್ತರ ಧ್ರುವದ ತುಪ್ಪಳಸೀಲ್ (ಕ್ಯಾಲೊರೈನಸ್) ವರ್ಷದಲ್ಲಿ 9 ತಿಂಗಳು ಸಮುದ್ರದಲ್ಲೇ ಇರುತ್ತವೆ. ಇವುಗಳ ಆಹಾರ ಬಹುವಾಗಿ ಮೀನು ಮತ್ತಿತರ ಕಡಲ ಪ್ರಾಣಿಗಳು. 100 ಕಿ.ಗ್ರಾಂ. ತೂಕದ ಪ್ರಾಣಿಯೊಂದು ದಿನಕ್ಕೆ 6 ಕಿ.ಗ್ರಾಂ. ಯಷ್ಟು ಆಹಾರವನ್ನು ಸೇವಿಸುತ್ತದೆ. ಪಿನ್ನಿಪೀಡಿಯಾಗಳು ದೊಡ್ಡದೊಡ್ಡ ಗುಂಪುಗಳಲ್ಲಿ ವಾಸಿಸುವುವು. ಓಟರೈಯಿಡೀ ಹಾಗೂ ಓಡೊಬೆನಿಡೀ ಕುಟುಂಬದ ಸೀಲ್‍ಗಳಲ್ಲಿ ಬಹುಪತ್ನಿತ್ವ ಕಂಡುಬರುತ್ತದೆ. ಆದರೆ, ಫೋಸಿಡಿ ಕುಟುಂಬದವು ಏಕ ಪತ್ನಿತ್ವವನ್ನು ಪ್ರದರ್ಶಿಸುತ್ತವೆ. ಮರಿಗಳನ್ನು ಇಡುವುದು ಬಂಡೆಗಳ ಮೇಲೆ ಇಲ್ಲವೇ ಮಂಜುಗಡ್ಡೆಯ ಮೇಲೆ. ಗರ್ಭಾವಧಿಯ ಕಾಲ 8-12 ತಿಂಗಳು. ಒಂದು ಸೂಲಿಗೆ ಒಂದೇ ಒಂದು ಮರಿ ಹುಟ್ಟುತ್ತದೆ. ಅಪರೂಪವಾಗಿ ಅವಳಿಗಳು ಹುಟ್ಟುವುದೂ ಉಂಟು. ಕೆಲವು ಪ್ರಭೇದಗಳಲ್ಲಿ ಆಗತಾನೆ ಹುಟ್ಟಿದ ಮರಿಗಳು ಈಜಬಲ್ಲವು. ಉಳಿದವುಗಳಲ್ಲಿ ಹಲವು ವಾರಗಳ ಅನಂತರ ಮಾತ್ರ ಅವು ನೀರಿಗಿಳಿಯಬಲ್ಲವು. ಮರಿಗಳ ಬೆಳೆವಣಿಗೆ ಬಲು ತೀವ್ರಗತಿಯದು. ತಾಯಿಯ ಹಾಲಿನಲ್ಲಿ ಶೇಕಡ 50 ಭಾಗ ಕೊಬ್ಬು ಇದ್ದು ಅದು ಬಲು ಪುಷ್ಟಿದಾಯಕವಾಗಿರುವುದೇ ಇದಕ್ಕೆ ಕಾರಣವಿರಬಹುದು. ಈ ಪ್ರಾಣಿಗಳಿಗೆ ಲೈಂಗಿಕ ಪ್ರಬುದ್ಧತೆ ಬರುವುದು ಅವು 2-5 ವರ್ಷ ವಯಸ್ಸಿನವಾದಾಗ. ಇವುಗಳ ಆಯಸ್ಸು 40 ವರ್ಷಗಳು. ಪಿನ್ನಿಪೀಡಿಯ ಪ್ರಾಣಿಗಳ ಸಹಜ ವೈರಿಗಳೆಂದರೆ ಶಾರ್ಕುಗಳು, ಕೊಲೆಗಡುಕ ತಿಮಿಂಗಿಲಗಳು, ವಾಲ್ರಸುಗಳು ಹಾಗೂ ಧ್ರುವ ಕರಡಿಗಳು.

ದಕ್ಷಿಣ ಅಮೆರಿಕದ ಪೆರು ಮುಂತಾದೆಡೆಗಳಲ್ಲಿ ಪಿನ್ನಿಪೀಡಿಯಾಗಳನ್ನು ತುಪ್ಪಳ, ತೈಲ, ಆಹಾರ ಹಾಗೂ ಗೊಬ್ಬರಗಳಿಗಾಗಿ ಬೇಟೆಯಾಡುವುದಿದೆ. ಈ ಪ್ರವೃತ್ತಿ ಈಗಿಗ ಕಡಿಮೆಯಾಗುತ್ತಿದೆ.					(ಜೆ.ಆರ್.ವಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ